
ಅಪ್ರತಿಮ ಚೆಲುವೆ ಈ ಅಂಬೋಲಿ
ಈಕೆಯದ್ದು ತ್ರಿಕೋನ ಪ್ರೇಮ; ಪ್ರೇಮಿಗಳಿಗಿಲ್ಲಿ ಸ್ವರ್ಗಕ್ಕೆ ಮೂರೇ ಗೇಣು!
ಇದು ಮಳೆಗಾಲ... ಎಲ್ಲಿ ನೋಡಿದರಲ್ಲಿ ಜಲಧಾರೆಗಳದ್ದೇ ಸುದ್ದಿ, ಜಲಪಾತಗಳದ್ದೇ ಸುಗ್ಗಿ.
ಮಲೆನಾಡು ಅಥವಾ ಮಳೆನಾಡು ಜಲಪಾತಗಳ ನಾಡು ಕೂಡ. ಬೆಟ್ಟ ಗುಡ್ಡಗಳಿಂದ ಕೂಡಿದ ಈ ಪ್ರದೇಶಗಳಲ್ಲಿ ಸಾಗುವ ನದಿಗುಂಟ, ಹಳ್ಳ -ಕೊಳ್ಳಗಳಗುಂಟ ಅಲ್ಲಲ್ಲಿ ಜಲಧಾರೆಗಳು ಧುಮ್ಮಿಕ್ಕುವ ದೃಷ್ಯ ಸಾಮಾನ್ಯ. ಮಳೆ ಹೆಚ್ಚಾದಂತೆ, ನೀರಿನ ಪ್ರಮಾಣ ಹೆಚ್ಚಾದಂತೆ ಹಾಲಿನ ನೊರೆಯ ಹಾಗೆ ಕಾಣು ಜಲಪಾತಗಳು ಸಹಜ ಸೌಂದರ್ಯದಿಂದಲೇ ಕಣ್ಮನ ಸೆಳೆಯುತ್ತವೆ.
ಸುತ್ತ ಗಿಡ-ಮರಗಳಿಂದ ಕೂಡಿದ ಪಶ್ಚಿಮ ಘಟ್ಟದ ದಟ್ಟನೆಯ ಕಾಡುಗಳು ಅವುಗಳ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತವೆ.
ಮಳೆಯ ಸಹಜ ಸವಿಯನ್ನು ಆಸ್ವಾದಿಸುವವರಿಗೆ ಜಲಪಾತಗಳ ಮೆರಗು ಇನ್ನಷ್ಟು ಸಂಭ್ರಮಿಸುವಂತೆ ಮಾಡುತ್ತದೆ.
ಪಶ್ಚಿಮ ಘಟ್ಟದ ಸೆರಗು ಎಂದೇ ಕರೆಸಿಕೊಳ್ಳುವ ಬೆಳಗಾವಿ ಜಿಲ್ಲೆ ಕೂಡ ಜಲಪಾತಗಳಿಗೆ ಪ್ರಸಿದ್ಧಿ. ಇಲ್ಲಿನ ರಸ್ತೆಗುಂಟ ಸಾಗಿದರೆ, ಕಾಡು-ಮೇಡು ಅಲೆದರೆ ನಿರಾಯಾಸವಾಗಿ ಅಲ್ಲಲ್ಲಿ ಎತ್ತರದಿಂದ ಧುಮ್ಮಿಕ್ಕುವ ಜಲಧಾರೆಗಳು ಕಣ್ಣಿಗೆ ಹಬ್ಬ ನೀಡುತ್ತವೆ. ಜಿಲ್ಲೆಯಾದ್ಯಂತ ಇರುವ ಮಳೆ ಜಲಪಾತಗಳ ಸೌಂದರ್ಯೋಪಾಸನೆಗೆ ಈಗ ಎಲ್ಲಿಲ್ಲದ ನೂಕು ನುಗ್ಗಲು.
ಗೋಕಾಕ ಜಲಪಾತ, ಗೋಡಚಿನಮಲ್ಕಿ ಫಾಲ್ಸ್, ಅಂಬೋಲಿ ಫಾಲ್ಸ್... ಹೀಗೆ ಹತ್ತು ಹಲವು ಜಲಪಾತಗಳಲ್ಲೀಗ ಜನದಟ್ಟಣೆ. ಅಂಬೋಲಿ ಜಲಪಾತಕ್ಕೆ ಹೋದರಂತೂ ಅಕ್ಕಪಕ್ಕದಲ್ಲಿ ಹತ್ತಾರು ಜಲಧಾರೆಗಳು ಕಣ್ಮನ ಸೆಳೆಯುತ್ತವೆ. ನೋಡುಗರನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುತ್ತದೆ.
ಅಪ್ರತಿಮ ಚೆಲುವೆ:
ಅಂಬೋಲಿಯದ್ದು ಒಂದು ರೀತಿಯಲ್ಲಿ ತ್ರಿಕೋನ ಪ್ರೇಮ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ -ಈ ಮೂರು ರಾಜ್ಯಗಳಲ್ಲಿ ಈಕೆಗೆ ಪ್ರೇಮಿಗಳಿದ್ದಾರೆ. ಮೂರೂ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಅಂಬೋಲಿ ಎಂಬ ಅಪ್ರತಿಮ ಚೆಲುವೆಯನ್ನು ನೋಡಲು ಈಗ ಮೂರೂ ರಾಜ್ಯಗಲ ಯುವ ಸಮೂಹ ಇಲ್ಲಿ ನಿತ್ಯವೂ ಸೇರುತ್ತದೆ. ಯುವ ಪ್ರೇಮಿಗಳಿಗಂತೂ ಇದು ಹೇಳಿ ಮಾಡಿಸಿದಂತಹ ಪ್ರದೇಶ,. ಮುಂಜಾನೆಯ ಮಂಜಿನಂತೆ ದಿನವಿಡೀ ದಟ್ಟ ಇಬ್ಬನಿ ಕವಿದುಕೊಂಡಿರುವ ಈ ಪ್ರದೇಶಕ್ಕೆ ಬಂದರೆ ಎಂತವರೂ ಮೈ ಮರೆಯುತ್ತಾರೆ. ಕುಣಿದು ಕುಪ್ಪಳಿಸುತ್ತಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಮೋಜು ಅನುಭವಿಸುತ್ತಾರೆ.
ಬೆಳಗಾವಿಯಿಂದ ಸುಮಾರು 90 ಕಿಮೀ ಅಂತರದಲ್ಲಿರುವ ವಿಶಿಷ್ಟ ಜಲಪಾತ ಅಂಬೋಲಿ. ಪಶ್ಚಿಮ ಘಟ್ಟದ ಸಹ್ಯಾದ್ರಿ ಬೆಟ್ಟದಿಂದ ಬೋರ್ಗರೆಯುವ ಈ ಜಲಪಾತ ಹಾಲಿನಂತಹ ಬಿಳುಪಿನಿಂದಾಗಿ ಪ್ರವಾಸಿಗರ ಕಣ್ಮನ ಸೆಳೆಯುತ್ತದೆ.
ಅಂಬೋಲಿ ಮಹಾರಾಷ್ಟ್ರದ ಸಿಂದುದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಪುಟ್ಟ ಗ್ರಾಮ. ಪಕ್ಕದಲ್ಲೇ ಗೋವಾ ಗಡಿಯೂ ಹಾದು ಹೋಗಿದೆ. ಇತ್ತ ಕರ್ನಾಟಕ ಗಡಿಯೂ ದೂರವೇನಿಲ್ಲ. ಬೆಳಗಾವಿಯಿಂದ ಅಂಬೋಲಿವರೆಗಿನ ಮಾರ್ಗದ ರಸ್ತೆಯ ಇಕ್ಕೆಲಗಳಲ್ಲಿ ಅನೇಕ ಸಣ್ಣ ಪುಟ್ಟ ಜಲಪಾತಗಳು ಕಾಣಸಿಗುತ್ತವೆ.
ಕುಣಿಯುವುದೇ ಸಂಭ್ರಮ:
ಬೆಳಗಾವಿ- ವೆಂಗುರ್ಲಾ ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಅಂಬೋಲಿಯ ದೊಡ್ಡ ಜಲಪಾತ ಸುಮಾರು 18 ಮೀಟರ್ ಎತ್ತರದಿಂದ ಧುಮುಕುತ್ತದೆ. ಇಲ್ಲಿನ ಜಲಧಾರೆಗೆ ಮೈ ಒಡ್ಡಿ ಕುಣಿಯುವುದೇ ದೊಡ್ಡ ಸಂಭ್ರಮ. ಈ ಜಲಪಾತವನ್ನು ವೀಕ್ಷಿಸಲು ನಿತ್ಯ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾದ ಸಾವಿರಾರು ಪ್ರವಾಸಿಗರ ದಂಡೇ ಆಗಮಿಸುತ್ತದೆ. ಈಗಂತೂ ಈ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ಜಲಪಾದತದ ಸೌಂದರ್ಯವೂ ಇಮ್ಮಡಿಯಾಗಿದೆ. ಹೆಣ್ಣು -ಗಂಡು ಬೇಧವಿಲ್ಲದೆ ಇಲ್ಲಿ ಪ್ರವಾಸಿಗರು ಸೇರುತ್ತಾರೆ.
ಅಂಬೋಲಿ ಹಿರಣ್ಯಕೇಶಿ ನದಿಯ ಉಗಮ ಸ್ಥಾನ. ತಳವೂ ಸ್ಪಷ್ಟವಾಗಿ ಕಾಣುವಷ್ಟು ತಿಳಿಯಾದ ನೀರು ಇಲ್ಲಿದ್ದು, ಪ್ರವಾಸಕ್ಕೆ ಬರುವ ಮಹಿಳೆಯರು, ಮಕ್ಕಳು, ಯುವಕರು, ಈ ಕೊಳದಲ್ಲಿ ಜಲಕ್ರೀಡೆಯಾಡುತ್ತಾರೆ. ಬಂದವರೆಲ್ಲ ಗಂಟೆ ಗಟ್ಟಲೆ ಸ್ನಾನ ಮಾಡುತ್ತಾರೆ.
ಹಿರಣ್ಯಕೇಶಿ ನದಿ ಉಗಮ ಸ್ಥಾನದಿಂದ ಸುಮಾರು 5 ಕಮೀ ದೂರದಲ್ಲಿ ಬೆಟ್ಟದ ಮೇಲೊಂದು ಸನ್ ಸೆಟ್ ಪಾಯಿಂಟ್ ಇದೆ. ಸೂರ್ಯ ನಿಧಾನವಾಗಿ ಮರೆಯಾಗುವ ಇಲ್ಲಿಯ ದೃಷ್ಯ ಬಲು ಅಪರೂಪ. ಇಲ್ಲಿಗೆ ಬಂದವರು ಸಂಜೆಯವರೆಗೂ ಇದ್ದು ಅದನ್ನೂ ಆಸ್ವಾದಿಸಿ ಹೋಗುತ್ತಾರೆ.
ಪ್ರವಾಸಿಗರ ಅನುಕೂಲಕ್ಕಾಗಿ ಮಹಾರಾಷ್ಟ್ರ ಲೋಕೋಪಯೋಗಿ ಇಲಾಖೆ ಇಲ್ಲಿ ಅತಿಥಿ ಗೃಹವೊಂದನ್ನು ನಿರ್ಮಿಸಿದೆ. ಎರಡು ಮೂರು ಖಾಸಗಿ ರೆಸಾರ್ಟ್ ಗಳೂ ಲ್ಲಿವೆ. ಈ ಎಲ್ಲವುಗಳಿಂದಾಗಿ ಅಂಬೋಲಿ ಪ್ರವಾಸಿಗರನ್ನು ಮತ್ತೆ ಮತ್ತೆ ಆಕರ್ಷಿಸುವ ಕೇಂದ್ರವಾಗಿದೆ.
ಹೋಗುವುದು ಹೇಗೆ:
ಬೆಳಗಾವಿಯಂದ ಅಂಬೋಲಿ ಜಲಪಾತಕ್ಕೆ 90 ಕಿಮೀ. ಇಲ್ಲಿಂದ ಹೋಗಲು ಸಾಕಷ್ಟು ಬಸ್ ಗಳಿವೆ. ಬೆಳಗಾವಿ- ಸಾವಂತವಾಡಿ, ಬೆಳಗಾವಿ-ವೆಂಗುರ್ಲಾ, ಬೆಳಗಾವಿ-ಚಂದಗಡ ಬಸ್ ಮೂಲಕ ಇಲ್ಲಿಗೆ ತಲುಪಬಹುದು.
ಸ್ವಂತ ವಾಹನ ಇಲ್ಲವೆ ಬಾಡಿಗೆ ವಾಹನದಲ್ಲಿ ತೆರಳಿದರೆ ಸೂರ್ಯಾಸ್ತಮಾನ ಸೇರಿದಂತೆ ಎಲ್ಲ ಸೌಂದರ್ಯವನ್ನೂ ಇಷ್ಟ ಬಂದಷ್ಟೂ ಆಸ್ವಾದಿಸಿ ಬರಬಹುದು.




No comments:
Post a Comment