ಕುಗ್ರಾಮದ ಬದುಕು...
ನಾನು ಹುಟ್ಟಿದ್ದು ಶಿರಸಿ ತಾಲೂಕಿನ ಹೆಗಡೆಕಟ್ಟಾ ಎನ್ನುವ ಹಳ್ಳಿಯ ಮಧ್ಯಮ ವರ್ಗದ ಕೃಷಿ ಕುಟುಂಬದಲ್ಲಿ. ಅಡಿಕೆ ಮತ್ತು ಭತ್ತ ನಮ್ಮ ಕುಟುಂಬದ ಜೀವನಾಧಾರದ ಪ್ರಮುಖ ಬೆಳೆ. ಜತೆಗೆ ಏಲಕ್ಕಿ, ಕಾಳುಮೆಣಸು, ಅಲ್ಪ ಸ್ವಲ್ಪ ತೆಂಗು ಇತ್ಯಾದಿ. ಅಜ್ಜ–ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ. ಅಪ್ಪ-ಅಮ್ಮ, ಚಿಕ್ಕಪ್ಪ-ಚಿಕ್ಕಮ್ಮ ಸೇರಿದಂತೆ, 20ಕ್ಕೂ ಹೆಚ್ಚು ಜನರಿರುವ ತುಂಬು ಕುಟುಂಬ. ಸಹಜವಾಗಿಯೇ ತೀರಾ ವಯಕ್ತಿಕ ಕಾಳಜಿ ಇಲ್ಲದ, ಎಲ್ಲರೊಳಗೊಂದಾಗಿ ಕಳೆದ ಬಾಲ್ಯ ನನ್ನದು.
ಅಂಗನವಾಡಿ ಕಳೆದು, ಪ್ರಾಥಮಿಕ ಶಾಲೆಗೆ ಸೇರಿದ ಒಂದೇ ತಿಂಗಳಲ್ಲಿ (1977-6ನೇ ವಯಸ್ಸು), ಅಲ್ಲಿಂದ 6 ಕಿಮೀ ದೂರದ ಕಲ್ಮನೆ ಎನ್ನುವ ಹಳ್ಳಿಗೆ ಅಪ್ಪ-ಅಮ್ಮ, ಮೂವರು ಅಕ್ಕಂದಿರು ಹಾಗೂ ಅಣ್ಣನೊಂದಿಗೆ ವಲಸೆ ಬರಬೇಕಾಯಿತು. ಕಲ್ಮನೆಯಲ್ಲಿ ಅಪ್ಪ ಜಮೀನು (ಅಡಿಕೆ ತೋಟ, ಭತ್ತದ ಗದ್ದೆ) ಖರೀದಿಸಿದ್ದು ಇದಕ್ಕೆ ಕಾರಣ. ಹೆಗಡೆಕಟ್ಟಾದಂತೆ ಕಲ್ಮನೆ ತುಂಬಿದೂರಲ್ಲ. ಅಲ್ಲೊಂದು, ಇಲ್ಲೊಂದು ಮನೆಗಳಿದ್ದವು. ಜತೆಗೆ, ಶಾಲೆಗೆ 4 ಕಿಮೀ ನಡೆಯಬೇಕಿತ್ತು. ವಿದ್ಯುತ್, ವಾಹನ ಸಂಪರ್ಕ ಯಾವುದೂ ಇಲ್ಲದ ಊರು ಅದು. ಹುಟ್ಟಿದೂರು ಬಿಟ್ಟು ಬರಲು ನನಗೆ ಮನಸ್ಸಿರಲಿಲ್ಲ. ಹಲವಾರು ರೀತಿಯ ಮನವೊಲಿಕೆ ಯತ್ನದ ನಂತರ, ಉದ್ದನೆಯ ಪಾಟಿ ಕಡ್ಡಿ (ಬಳಪ) ಕೊಡಿಸುವುದಾಗಿ ಅಕ್ಕ ಆಮಿಷ ಒಡ್ಡಿದಳು. 5 ಪೈಸೆಯ ಒಂದು ಕಡ್ಡಿಯಲ್ಲಿ 4 ಪೀಸ್ ಮಾಡಿ ವಾರಕ್ಕೊಂದು ಪೀಸ್ ಕೊಡುತ್ತಿದ್ದ ಆ ಸಂದರ್ಭದಲ್ಲಿ ಇಡಿಯಾದ ಕಡ್ಡಿ ಕೊಡುತ್ತೇನೆಂದಿದ್ದು ನಾನು ಕಲ್ಮನೆಗೆ ಬರಲೊಪ್ಪುವಂತೆ ಮಾಡಿತು.
ಅದೊಂದು ಕುಗ್ರಾಮ...
ಕಲ್ಮನೆಗೆ ಬಂದ ಮೇಲೆ ಆ ಊರಿಗೆ ಒಗ್ಗಿಕೊಳ್ಳಲು ನಾವು ಪಟ್ಟ ಪ್ರಯಾಸ ಅಷ್ಟಿಷ್ಟಲ್ಲ. ಒಂದು ರೀತಿಯಲ್ಲಿ ಅದು ಕುಗ್ರಾಮವಾಗಿತ್ತು. ಊರಿನ್ನೂ ವಿದ್ಯುತ್ ಕಂಡಿರಲಿಲ್ಲ. ಸೀಮೆ ಎಣ್ಣೆಯ (ಚಿಮಣಿ) ದೀಪದಲ್ಲೇ ರಾತ್ರಿಗಳನ್ನು ಕಳೆಯಬೇಕಿತ್ತು. ತಾತ್ಕಾಲಿಕ ವಾಸಕ್ಕಾಗಿ ಒಂದೇ ಕೊಠಡಿಯ ಸಣ್ಣ ಮನೆ ನಿರ್ಮಿಸಿಕೊಳ್ಳಲಾಗಿತ್ತು. ಬಿದಿರಿನ ತಟ್ಟಿ ಕಟ್ಟಿಕೊಂಡು ಅಡಿಗೆ ಮನೆ, ಮಲಗುವ ಕೋಣೆ, ಹಾಲ್ ಎಂದು ವಿಭಜಿಸಿಕೊಳ್ಳಲಾಗಿತ್ತು. ಸೈಕಲ್ ಸೇರಿದಂತೆ ಮನೆಯಲ್ಲಿ ಯಾವ ವಾಹನವೂ ಇರಲಿಲ್ಲ. ಶಿರಸಿ ಪಟ್ಟಣದಿಂದ 13 ಕಿಮೀ ಇರುವ ಹಳ್ಳಿಯಿಂದ ಪೇಟೆಗೆ ಹೋಗಲು ಯಾವುದೇ ವಾಹನ (ಬಸ್ಸು ಸೇರಿದಂತೆ) ಹಿಡಿಯಬೇಕೆಂದರೆ 3 ಕಿಮೀ ನಡೆದುಕೊಂಡು ಮುಖ್ಯ ರಸ್ತೆಗೆ ಹೋಗಬೇಕಿತ್ತು. ಒಂದೇ ಒಂದು ಕಡ್ಡಿ ಪೆಟ್ಟಿಗೆ ಬೇಕೆಂದರೂ ಕನಿಷ್ಟ 5 ಕಿಮೀ ದೂರ ಹೋಗಬೇಕು. ಶಾಲೆಗೂ ನಿತ್ಯ 16 ಕಿಮೀ (4 ಬಾರಿ ತಲಾ 4 ಕಿಮೀ) ನಡೆಯಬೇಕಿತ್ತು. (ಕಲ್ಮನೆ ಗ್ರಾಮ ಇಂದಿಗೂ ಕೂಡ ಹೆಚ್ಚಿನ ಅಭಿವೃದ್ಧಿಯನ್ನೇನು ಕಂಡಿಲ್ಲ. ವಿದ್ಯುತ್ ಸಂಪರ್ಕ ಸಿಕ್ಕಿದ್ದು, ಕಿರಿಯ ಪ್ರಾಥಮಿಕ ಶಾಲೆ ಆಗಿದ್ದನ್ನು ಬಿಟ್ಟರೆ ಮತ್ತೇನೂ ಆಗಿಲ್ಲ. ಹಿರಿಯ ಪ್ರಾಥಮಿಕ ಶಾಲೆಗೆ 4 ಕಿಮೀ, ಪ್ರೌಢ ಶಾಲೆಗೆ 7 ಕಿಮೀ, ಬಸ್ ಹಿಡಿಯಲು 3 ಕಿಮೀ, ಅಂಗಡಿಗಾಗಿ 5 ಕಿಮೀ ಇಂದೂ ನಡೆಯಲೇ ಬೇಕು.)
ಕಲ್ಮನೆಗೆ ಬಂದು 3 ವರ್ಷದಲ್ಲಿ ಹೊಸ ಮನೆಯೊಂದನ್ನು ಕಟ್ಟಿಕೊಂಡೆವು. ಊರಲ್ಲೇ ಲಭ್ಯವಿದ್ದ ಕಪ್ಪು ಕಲ್ಲು, ಕಟ್ಟಿಗೆಗಳನ್ನು, ಸ್ಥಳೀಯವಾಗಿ ಸಿಗುತ್ತಿದ್ದ ಕೂಲಿಗಳನ್ನು ಬಳಸಿ, ಸುಮಾರು 40 ಸಾವಿರ ರು. ವೆಚ್ಚ ಮಾಡಿ ಸುಮಾರು 10 ಸಾವಿರ ಚದರ್ ಅಡಿ ವಿಸ್ತೀರ್ಣದ ಹೆಂಚಿನ ಮನೆ ನಿರ್ಮಾಣವಾಯಿತು. ಅದಾಗಿ 3-4 ವರ್ಷಕ್ಕೆ ಊರಿಗೆ ವಿದ್ಯುತ್ ಸಂಪರ್ಕವನ್ನೂ ಪಡೆಯಲಾಯಿತು.
ಇನ್ನೇನು ಎಲ್ಲವೂ ಸರಿ ಹೋಯಿತು, ಹೊಸ ಊರಿಗೆ ಹೊಂದಿಕೊಂಡೆವು ಎನ್ನುವ ಹೊತ್ತಿಗೆ ದೊಡ್ಡ ಆಘಾತ ಕಾದಿತ್ತು. ನಾವು ಬಹಿರಂಗ ಹರಾಜಿನಲ್ಲಿ ಖರೀದಿಸಿದ್ದ ಜಮೀನು ಪುನಃ ಹಳೆಯ ಮಾಲಿಕರ ಹೆಸರಿಗೇ ನೊಂದಣಿಯಾಗಿಬಿಟ್ಟಿತ್ತು. ನಮ್ಮ ಹೆಸರಿಗೆ ಮನೆಯ ಜಾಗ ಬಿಟ್ಟರೆ ಬೇರೇನೂ ಉಳಿದಿರಲಿಲ್ಲ. ಜಮೀನನ್ನು ಹರಾಜು ಮಾಡಿ ಹಣ ತುಂಬಿಸಿಕೊಂಡಿದ್ದ ಸಹಕಾರಿ ಸಂಸ್ಥೆಯೂ ನಮ್ಮ ಪರವಾಗಿ ನಿಲ್ಲಲು ಸಿದ್ಧವಿರಲಿಲ್ಲ. ಆಗಲೇ ಮನೆ ಕಟ್ಟಿ ಮೈ ತುಂಬ ಸಾಲ ಮಾಡಿಕೊಂಡಿದ್ದರಿಂದ ಕಾನೂನು ಹೋರಾಟ ಮಾಡಲೂ ಹಣವಿರಲಿಲ್ಲ. ವಂಶಪಾರಂಪರಿಕವಾಗಿ ಬಂದಿದ್ದ ಜಮೀನನ್ನು ಆಗಲೆ ದೊಡ್ಡಪ್ಪ, ಚಿಕ್ಕಪ್ಪನಿಗೆ ಬರೆದು ಕೊಟ್ಟಾಗಿತ್ತು. ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ಅಂತೂ ಇಂತು ಹತ್ತಿರದ ಸಂಬಂಧಿಯೊಬ್ಬರಿಂದ ಸಾಲ ಪಡೆದು ಕಾನೂನು ಹೋರಾಟಕ್ಕಿಳಿಯಲಾಯಿತು. ಹೈಕೋರ್ಟ್ ವರೆಗೂ ಹೋಯಿತು ವ್ಯಾಜ್ಯ.
50 ರು. ಫೀ ತುಂಬಲಾಗದೆ...
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿರುವಾಗಲೇ ನನ್ನ ಪ್ರಾಥಮಿಕ ಶಾಲೆ ಮುಗಿದು ಹೈಸ್ಕೂಲ್ ಮೆಟ್ಟಿಲು ಹತ್ತಬೇಕಿತ್ತು. ಅಕ್ಕ ಟಿಸಿಎಚ್ ಓದುತ್ತಿದ್ದರೆ, ಅಣ್ಣ 10ನೇ ತರಗತಿಗೆ ತೇರ್ಗಡೆಯಾಗಿದ್ದ. ಆ ಹೊತ್ತಿಗೆ ನಮ್ಮ ಮನೆಯಲ್ಲಿ ಶಿಕ್ಷಕಿಯೊಬ್ಬರು ಉಳಿದುಕೊಂಡಿದ್ದರು. ಮನೆ ಬಾಡಿಗೆ, ಊಟ, ತಿಂಡಿ ಎಂದು ಅವರು ತಿಂಗಳಿಗೆ 150 ರು. ನೀಡುತ್ತಿದ್ದರು. ಅದೇ ಹಣವನ್ನು ಅಕ್ಕನ ಶಿಕ್ಷಣ ವೆಚ್ಚಕ್ಕೆ ಕಳುಹಿಸಲಾಗುತ್ತಿತ್ತು.
ನಾನು 8ನೇ ತರಗತಿಗೆ ಪ್ರವೇಶ ಪಡೆಯಬೇಕಿತ್ತು. ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ನಲ್ಲಿ ಪ್ರತಿ ವಿದ್ಯಾರ್ಥಿಗೆ ಅಂದು 50 ರು. ಪ್ರವೇಶ ಫೀ ನಿಗದಿಪಡಿಸಲಾಗಿತ್ತು. ಆದರೆ, ಇಬ್ಬರ ಪ್ರವೇಶ ಫೀ ತುಂಬುವ ಸ್ಥಿತಿಯಲ್ಲಿರಲಿಲ್ಲ. ಹಾಗಾಗಿ, ಅಲ್ಲಿಗೇ ನನ್ನ ವಿದ್ಯಾಭ್ಯಾಸ ಮೊಟಕು ಮಾಡುವ ಸ್ಥಿತಿ ನಿರ್ಮಾಣವಾಯಿತು.
ಆದರೆ, ಅಂತಹ ತೀರ್ಮಾನ ತೆಗೆದುಕೊಳ್ಳುವ ಮುನ್ನ ತಂದೆಯವರು ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದರು. ಅಂದಿನ ಹೈಸ್ಕೂಲ್ ಮುಖ್ಯಾಧ್ಯಾಪಕರು ನನ್ನ ತಂದೆಯೊಂದಿಗೆ ಓದಿದವರಾಗಿದ್ದರು. ಇದೇ ಪರಿಚಯ ಬಳಸಿಕೊಂಡು ಅಣ್ಣನ ಮತ್ತು ನನ್ನ ಫೀ ಸೇರಿ 100 ರುಪಾಯಿಗೆ ಬದಲಾಗಿ, ಒಟ್ಟಾಗಿ 75 ರು. ಪಡೆದು ಸಹಾಯ ಮಾಡುವಂತೆ ತಂದೆಯವರು ಮುಖ್ಯಾಧ್ಯಾಪಕರನ್ನು ವಿನಂತಿಸಿದರು. ಮುಳುಗುವವನಿಗೆ ಹುಲ್ಲಿನ ಕಡ್ಡಿ ಆಸರೆ ಎನ್ನುವಂತೆ 25 ರುಪಾಯಿ ರಿಯಾಯಿತಿ ಸಿಕ್ಕರೂ ಆ ಪರಿಸ್ಥಿತಿಯಲ್ಲಿ ಅದೊಂದು ದೊಡ್ಡ ಸಹಾಯವೇ ಆಗುತ್ತಿತ್ತು ನಮಗೆ. ಖಾಸಗಿ ಆಡಳಿತ ಮಂಡಳಿಯಾಗಿದ್ದರಿಂದ ಮುಖ್ಯಾಧ್ಯಾಪಕರಿಗೆ ಅಂತಹ ಅಧಿಕಾರವಿತ್ತು. ಸ್ವಂತ ಅಡಿಕೆ ತೋಟವನ್ನೂ ಹೊಂದಿದ್ದ ಮುಖ್ಯಾಧ್ಯಾಪಕರು ಆರ್ಥಿಕವಾಗಿ ಸಾಕಷ್ಟು ಬಲಾಢ್ಯರೂ ಆಗಿದ್ದರಿಂದ ಮನಸ್ಸು ಮಾಡಿದ್ದರೆ ತಾವೇ 25 ರು. ತುಂಬುವುದೂ ಅವರಿಗೆ ದೊಡ್ಡ ಕೆಲಸವಾಗಿರಲಿಲ್ಲ. ಆದರೆ ಅದ್ಯಾವುದಕ್ಕೂ ಅವರು ಮನಸ್ಸು ಮಾಡಲಿಲ್ಲ. ಕಡ್ಡಿ ತುಂಡು ಮಾಡಿದಂತೆ ನಿರಾಕರಿಸಿಬಿಟ್ಟರು.
ಅದಾಗಲೇ ಸಾಲದ ಹೊರೆ ಸಾರಷ್ಟು ಬೆಳೆದು ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಆರ್ಥಿಕವಾಗಿ ಪ್ರಬಲರಾಗಿರುವ ಸಂಬಂಧಿಕರು ಸಾಕಷ್ಟಿದ್ದರೂ ಬೇರೆ ಯಾರಿಂದಲೂ ಸಾಲ ಕೇಳು ಮನಸ್ಥಿತಿಯಲ್ಲಿ ತಂದೆಯವರಿರಲಿಲ್ಲ. ಹೈಸ್ಕೂಲ್ ಪ್ರವೇಶದ ಅವಧಿ ಮುಗಿಯುತ್ತ ಬಂದರೂ ಬೇರೆ ಯಾವುದೇ ದಾರಿ ಕಾಣದೆ ತಂದೆಯವರು ಪಟ್ಟ ಪರದಾಟ ಇಂದಿಗೂ ನನ್ನ ಮನಸ್ಸಿನಿಂದ ಅಳಿಸಿಲ್ಲ. ಎಷ್ಟೇ ಕಷ್ಟವಾದರೂ ಅನುತ್ತೀರ್ಣರಾಗದೆ, ಕಲಿಯುವವರೆಗೆ ಇಬ್ಬರನ್ನೂ ಓದಿಸಲೇಬೇಕೆಂದು ತಂದೆಯವರು ನಿರ್ಧರಿಸಿದರು. ಕೊನೆಗೂ ಹೇಗೋ ಧೈರ್ಯ ಮಾಡಿ ಮತ್ತೆ ಮೊದಲು ಸಾಲ ಪಡೆದಿದ್ದ ತಾಯಿಯ ಸಹೋದರ ಸಂಬಂಧಿಯಿಂದಲೇ ಸಾಲ ಪಡೆದು ಫೀ ತುಂಬಿದರು. ಅಂತೂ ನಾನೂ ಹೈಸ್ಕೂಲ್ ಮೆಟ್ಟಿಲು ಹತ್ತುವುದು ಖಚಿತವಾಯಿತು.
ಮನೆಯಿಂದ ಹೈಸ್ಕೂಲ್ 6 ಕಿಮೀ ದೂರವಿತ್ತು. ಯಾವುದೇ ವಾಹನ ವ್ಯವಸ್ಥೆ ಇರಲಿಲ್ಲ. ನಿತ್ಯ ಬೆಳಗ್ಗೆ 6 ಕಿಮೀ, ಸಂಜೆ 6 ಕಿಮೀ ಓಡಾಟ ಶುರುವಾಯಿತು. ಬೆಳಗ್ಗೆ 8.30ಕ್ಕೆ ಮನೆ ಬಿಟ್ಟರೆ, ಮರಳಿ ಬರುವ ಹೊತ್ತಿಗೆ ಸಂಜೆ 6 ಗಂಟೆ. .
ಅಂದಿನ ಪರಿಸ್ಥಿತಿಯಲ್ಲಿ, ತಂದೆಯವರು ಕಾನೂನು ಹೋರಾಟ ಮಾಡುತ್ತಲೇ ನಮ್ಮನ್ನು ಓದಿಸಿ, ಕುಟುಂಬ ನಿರ್ವಹಿಸಿದ ಪರಿಯನ್ನು ಎಂದಿಗೂ ಮರೆಯುವಂತಿಲ್ಲ.

No comments:
Post a Comment